ಬಾಲನಾಗಮ್ಮ -
ಕರುಳು ಮಿಡಿಯುವ ಸನ್ನಿವೇಶಗಳಿಂದ ತುಂಬಿರುವ ಪದ್ಯರೂಪದಲ್ಲಿ ದೊರೆಯುವ ಪ್ರಸಿದ್ಧ ಜನಪದ ಕಥೆ. ಕಥೆಯ ಹಂದರ ಹೀಗಿದೆ: ಕಾಳಿಂಗರಾಯ ಮತ್ತು ಈರಲಕ್ಷ್ಮಿ ದಂಪತಿಗಳ ಏಳು ಜನ ಹೆಣ್ಣು ಮಕ್ಕಳ ಪೈಕಿ ಕೊನೆಯವಳೇ ಬಾಲನಾಗಮ್ಮ. ಊರಲ್ಲಿ ಕಟ್ಟುತ್ತಿದ್ದ ಕೋಟೆ ಬೆಳೆದುನಿಂತ ಹೆಣ್ಣು ಮಕ್ಕಳ ಉಸಿರು ತಾಕಿದಾಗ ಬಿದ್ದುಹೋಗುತ್ತಿದ್ದ ರಹಸ್ಯವನ್ನರಿತ ಕಾಳಿಂಗರಾಯ ಚಿಂತೆಗೀಡಾಗುತ್ತಾನೆ. ತಾನೆ ತನ್ನ ಮಕ್ಕಳನ್ನು ಕರೆದೊಯ್ದು ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಕಾಡಿನಲ್ಲಿ ದಿಕ್ಕೆಟ್ಟ ಅವರುಗಳನ್ನು ಅಲ್ಲಿಗೆ ಬೇಟೆಗಾಗಿ ಬಂದವರು ಕರೆದೊಯ್ದು ಮದುವೆಯಾಗುತ್ತಾರೆ. ಮುಂದೆ ಬಾಲನಾಗಮ್ಮ ಗಂಡುಮಗುವಿನ ತಾಯಿಯೂ ಆಗುತ್ತಾಳೆ.

ಬಾಲನಾಗಮ್ಮ ಒಮ್ಮೆ ತಲೆ ಬಾಚಿಕೊಳ್ಳುವಾಗ ಕಿತ್ತುಬಂದ ಒಂದು ಹಿಡಿಯಾಗಬಹುದಾದಷ್ಟು ಉದ್ದವಾದ ಒಂದೇ ಒಂದು ಬಂಗಾರದಂಥ ಕೂದಲನ್ನು ಉಂಡೆಕಟ್ಟಿ ಸಮುದ್ರಕ್ಕೆ ಎಸೆಯುತ್ತಾಳೆ. ಆ ಕೂದಲಿನ ಸೌಂದರ್ಯವನ್ನೂ, ಅದರ ಉದ್ದವನ್ನೂ ಆಕಸ್ಮಿಕವಾಗಿ ಕಂಡ ಮಾಂತ್ರಿಕ ಫಕೀರನೊಬ್ಬ ಆಕೆಯ ಬಗೆಗೆ ಮೋಹತಾಳಿ ಆಕೆಯನ್ನು ಪಡೆದೇ ತೀರಬೇಕೆಂದು ನಿಶ್ಚಯಿಸುತ್ತಾನೆ.

ಬಾಲನಾಗಮ್ಮನಿದ್ದ ಸ್ಥಳಕ್ಕೆ ಫಕೀರ ಭಿಕ್ಷೆ ಬೇಡುವ ನೆಪದಲ್ಲಿ ಬರುತ್ತಾನೆ. ಬಂಜೆಯರೆಂಬ ಕಾರಣ ಒಡ್ಡಿ ಮೊದಲ ಆರು ಜನ ಸೋದರಿಯರು ನೀಡಲು ಬಂದ ಭಿಕ್ಷೆಯನ್ನು ನಿರಾಕರಿಸಿ ಮಗುವಿನ ತಾಯಿಯಾದ ಬಾಲನಾಗಮ್ಮನೇ ಭಿಕ್ಷೆ ಹಾಕಬೇಕೆನ್ನುತ್ತಾನೆ. ಭಿಕ್ಷೆ ಹಾಕಲು ಬಂದಾಗ ಯುಕ್ತಿಯಿಂದ ಬಾಲನಾಗಮ್ಮನನ್ನು ಅಪಹರಿಸಿಕೊಂಡು ಹೋಗುತ್ತಾನೆ.

ಬೇರೆ ಮಾರ್ಗ ಕಾಣದ ಬಾಲನಾಗಮ್ಮ ಫಕೀರನಿಗೆ ಅವನೇ ಮುಂದೆ ತನ್ನ ಗಂಡ ಎಂಬ ಹುಸಿ ನಂಬಿಕೆ ಹುಟ್ಟಿಸಿ ಹನ್ನೆರಡು ವರ್ಷದ ನೋಂಪಿ ಆಚರಿಸಲು ಅವನ ಅನುಮತಿ ಪಡೆಯುತ್ತಾಳೆ.
ಇತ್ತ, ಆರುಜನ ಅಕ್ಕಂದಿರೂ ಬಾಲನಾಗಮ್ಮನ ಮಗನನ್ನು ಸಾಕುತ್ತಾರೆ. ಹುಡುಗ ಬೆಳೆದು ಗೋಲಿಗೆಜ್ಜುಗ ಆಡುವಷ್ಟು ದೊಡ್ಡವನಾಗುತ್ತಾನೆ. ಜೊತೆಯ ಹುಡುಗರ ಗೋಲಿಗಜ್ಜುಗಳನ್ನೆಲ್ಲ ಈತ ಗೆದ್ದುಕೊಂಡಾಗ ಕುಪಿತರಾದ ಆ ಹುಡುಗರು, ನಿನ್ನ ತಾಯಿ ಯಾವನೋ ಫಕೀರನನ್ನು ಕಟ್ಟಿಕೊಂಡು ಓಡಿಹೋದಳೆಂದು ಹಂಗಿಸುತ್ತಾರೆ. ಖಿನ್ನನಾದ ಆ ಹುಡುಗ ಮನೆಗೆ ಬಂದು, ತನ್ನ ದೊಡ್ಡಮ್ಮಂದಿರಿಂದ ನಡೆದ ಸಂಗತಿಯನ್ನು ತಿಳಿದು, ತನ್ನ ತಾಯಿಯನ್ನು ಹುಡುಕಿ ತರುತ್ತೇನೆಂದು ಹೇಳಿ ಹೊರಡುತ್ತಾನೆ.

ಮುಂದೆ ಹುಡುಗ ಫಕೀರನಿದ್ದ ಪಟ್ಟಣ ಸೇರಿ ಅಲ್ಲಿ ಹೂಗಾರ ಮುದುಕಿಯ ಆಶ್ರಯ ಪಡೆಯುತ್ತಾನೆ. ಫಕೀರನ ಹೆಂಡತಿಯರೆನಿಸಿಕೊಂಡಿದ್ದ ಬಾಲನಾಗಮ್ಮ ಮತ್ತು ನಿಂಗಮ್ಮನಿಗೆ ಮಾಲೆ ಕಟ್ಟಿ ಕೊಟ್ಟುಬರುವುದು ಆ ಮುದುಕಿಯ ಕಾಯಕ. ಈ ಹುಡುಗ ತನ್ನ ತಾಯಿಗೆ ಹೋಗುವ ಮಾಲೆಯ ಜೊತೆಗೆ ಚೀಟಿಯೊಂದನ್ನು ಬರೆದಿಡುತ್ತಾನೆ. ಆ ಮೂಲಕ ತಾಯಿ ಮಗನ ಭೇಟಿಯಾಗುತ್ತದೆ.

ಫಕೀರನ ಪ್ರಾಣ ಎಲ್ಲಿದೆ ಎಂದು ತಾಯಿಯ ಮೂಲಕ ತಿಳಿದುಕೊಂಡ ಬಾಲಕ ಏಳು ಸಮುದ್ರ ದಾಟಿಹೋಗಿ, ಆಲದ ಮರದಡಿಯಲ್ಲಿದ್ದ ತಾವರೇ ಕೊಳದ ತಳದ ತೊಟ್ಟಿಲ ಬಾವಿ ಪ್ರವೇಶಿಸಿ, ಅಲ್ಲಿನ ಗಾಜಿನ ಕಂಬದಲ್ಲಿದ್ದ ಫಕೀರನ ಪ್ರಾಣಪಕ್ಷಿಯಾದ ನವಲೆದುಂಬಿಯನ್ನು ತರುತ್ತಾನೆ.

ಅದರ ಕೈ ಮುರಿದರೆ ಫಕೀರನ ಕೈ, ಅದರ ಕಾಲುಮುರಿದರೆ ಫಕೀರನ ಕಾಲು, ಅದರ ಕತ್ತು ಮುರಿದರೆ ಫಕೀರನ ಕತ್ತು- ಹೀಗೆ ಒಂದೊಂದಾಗಿ ಮುರಿದು ಫಕೀರನನ್ನು ಕೊಂದು ತಾಯಿಯನ್ನು ಬಿಡಿಸಿಕೊಂಡು ಬರುತ್ತಾನೆ. ಇಷ್ಟು ಮೂಲಕಥೆ.

ಇದರ ಅನೇಕ ಪಾಠಾಂತರಗಳು ಲಭ್ಯವಿವೆ. ಅವುಗಳಲ್ಲಿಯ ಕೆಲವು ವ್ಯತ್ಯಸ್ತ ಅಂಶಗಳು ಹೀಗಿವೆ: ಅವರು ಆರು ಜನ ಅಕ್ಕಂದಿರಿಗೂ ಮಕ್ಕಳಾಗಿ ತನಗೆ ಮಾತ್ರ ಮಕ್ಕಳಾಗದಿದ್ದಾಗ ಬಾಲನಾಗಮ್ಮ ಋಷಿಯೊಬ್ಬನ ಮೊರೆ ಹೋಗಿ ಗಂಡುಮಗುವೊಂದನ್ನು ಪಡೆಯುತ್ತಾಳೆ. (2) ಏಳು ಜನ ಸೋದರಿಯರಿಗೂ ಹಿರಿಯನಾದ ಒಬ್ಬ ಒಡ ಹುಟ್ಟಿದ ಅಣ್ಣ ಇರುತ್ತಾನೆ. (3) ಫಕೀರನ ಸೋರೆಯ ಬುರುಡೆ, ಮಂತ್ರದ ಬೂದಿಯಿಂದ ಕೋಟ್ಯಾನುಕೋಟಿ ಮಕ್ಕಳನ್ನು ನಿರ್ಮಿಸುತ್ತಾನೆ. (4) ಫಕೀರ ಮಾಯದ ಬೂದಿ ಊದುವುದರ ಮೂಲಕ ಬಾಲನಾಗಮ್ಮನ ಅಣ್ಣನನ್ನು ತಾಳೆ ಮರವನ್ನಾಗಿಯೂ, ಗಂಡನನ್ನು ತೆಂಗಿನಮರವನ್ನಾಗಿಯೂ ಮಾಡುತ್ತಾನೆ. (5) ಅಂಚಿಕಡ್ಡಿ ಕೀಲಿಮಾಡಿ, ಭೂಮಿನೆ ರಥವ ಮಾಡಿ ಬಾಲನಾಗಮ್ಮನನ್ನು ಫಕೀರ ಅಪಹರಿಸುತ್ತಾನೆ ಇತ್ಯಾದಿ.

ಬಂಜೆತನ, ವಿರಹ, ತಾಯಿಗಾಗಿ ಬಾಲಕ ಪಡುವ ಕಷ್ಟ, ಮಾಯಕಾರ ಫಕೀರನ ಕ್ರೌರ್ಯ-ಇತ್ಯಾದಿಗಳಿಂದ ಉದ್ದಕ್ಕೂ ಕೇಳುಗರನ್ನು ಸೆರೆಹಿಡಿದು ರೋಮಾಂಚನಗೊಳಿಸುವ ಈ ಕಾವ್ಯ ತುಂಬ ಜನಪ್ರಿಯ. ಈ ಕಥೆಯನ್ನು ಆಧರಿಸಿ ಚಲನಚಿತ್ರವನ್ನೂ ತೆಗೆಯಲಾಗಿದೆ.
(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ